ಕವುಲುಮರ

 ಲೆಸಿತಿಡೇಸೀ ಕುಟುಂಬಕ್ಕೆ ಸೇರಿದ ಕರೇಯ ಆರ್ಬೋರಿಯ ಎಂಬ ಶಾಸ್ತ್ರೀಯನಾಮದ, ಹುಲ್ಲುಗಾವಲು ಮತ್ತು ಬಯಲು ಪ್ರದೇಶಗಳಲ್ಲಿ ಕಂಡುಬರುವ ಮಧ್ಯಪ್ರಮಾಣದ ಮರ. ದೊಡ್ಡ ಅಂಡಾಕಾರದ, ಗರಗಸದಂಥ ಅಂಚುಳ್ಳ ಎಲೆಗಳು, ಹಳದಿ ಮಿಶ್ರಿತ ಬಿಳಿಯ ಬಣ್ಣದ ಹೂಗಳು, ದೊಡ್ಡಗಾತ್ರದ ಗುಂಡಗಿನ ಕಾಯಿಗಳು_ಇದರ ಮುಖ್ಯ ಲಕ್ಷಣಗಳು. ಇದರ ತೊಗಟೆ ದಪ್ಪ, ಕಪ್ಪು ಮಿಶ್ರಿತ ಬೂದುಬಣ್ಣದ್ದು; ಒಳಭಾಗದಲ್ಲಿ ಕೆಂಪಗಿರುತ್ತದೆ. ಇದರಿಂದ ಹಗ್ಗ ಮಾಡಲು ಬರುವಂಥ ನಾರು ಸಿಗುತ್ತದೆ. ಚೌಬೀನೆ ಧೃಡವಾದುದೂ ಗಟ್ಟಿಯಾದುದೂ ಭಾರವಾದುದೂ ಆಗಿದೆ. ಆದರೆ ಬಲು ಬಿರುಸಾದ ಮರವಾದ್ದರಿಂದ ಬೇಗ ಸೀಳುಗಳಾಗಿ ಭಾಗವಾಗುತ್ತದೆ. ಅಲ್ಲದೆ ಡೊಂಕಾಗುವುದೂ ಉಂಟು. ಆದ್ದರಿಂದ ಇದು ನಿಧಾನವಾಗಿ ಒಣಗುವಂತೆ ಎಚ್ಚರ ವಹಿಸಬೇಕು. ಕೊಯ್ಯುವುದಕ್ಕೆ ಕಷ್ಟವಾದರೂ ಒಳ್ಳೆಯ ಮೆರುಗು ಬರುವಂತೆ ಪಾಲಿಷ್ ಮಾಡಬಹುದು. ಹಲಗೆಗಳು, ಗಾಡಿ ಸಾಮಾನುಗಳು, ಸಂರಕ್ಷಕಗಳಿಂದ ಪರಿಷ್ಕರಿಸಿದ ಮೇಲೆ ರೈಲ್ವೆ ಸ್ಲೀಪರುಗಳು ಮುಂತಾದುವನ್ನು ಮಾಡಲು ಮರವನ್ನು ಬಳಸಬಹುದು.

 ತೊಗಟೆ ಮತ್ತು ಕಾಯಿಗಳಿಗೆ ಔಷಧೀಯ ಗುಣಗಳಿವೆ. ಇವನ್ನು ಕೆಮ್ಮು ನೆಗಡಿಗಳ ಶಾಮಕವಾಗಿಯೂ ಜ್ವರನಿವಾರಕವಾಗಿಯೂ ಜೀರ್ಣಶಕ್ತಿಯನ್ನು ಹೆಚ್ಚಿಸಲೂ ಬಳಸುತ್ತಾರೆ.     

(ಎ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ